ಜಂಬೀರ ಫಲಗಳು -ಕಿತ್ತಳೆ, ದ್ರಾಕ್ಷಿ ಹಣ್ಣು, ಚಕ್ಕೋತ, ನಿಂಬೆ, ಮಾದಲ, ಮೋಸಂಬಿ ಮುಂತಾದ ಹಣ್ಣುಗಳಿರುವ ಸಾಮಾನ್ಯ ಹೆಸರು (ಸಿಟ್ರಸ್ ಪ್ರೂಟ್ಸ್). ಮಾನವನಿಗೆ ಅತ್ಯುಪಯುಕ್ತವೆನಿಸಿರುವ ಇವು ಪ್ರಪಂಚದ ಉಷ್ಣ ಹಾಗೂ ಸಮಶೀತೋಷ್ಣವಲಯಗಳಲೆಲ್ಲ ಬೇಸಾಯದಲ್ಲಿವೆ. ಇವುಗಳಲ್ಲಿ ಸುಮಾರು 16 ಪ್ರಭೇದಗಳುಂಟು. ಸಿಟ್ರಸ್ ಇಂಡಿಕ, ಸಿ. ಲ್ಯಾಟಿಪಸ್ ಮತ್ತು ಸಿ.ಹಿಸ್ಟ್ರಿಕ್ಸ್ ಎಂಬ ಮೂರು ಬಗೆಗಳನ್ನು ಬಿಟ್ಟರೆ ಉಳಿದವೆಲ್ಲ ಬೇಸಾಯದ ಬೆಳೆಗಳು. ಜಂಬೀರ ಜಾತಿಯ ಗಿಡಗಳಲ್ಲಿ ಅನೇಕ ವ್ಯತ್ಯಾಸಗಳನ್ನು ಗುರುತಿಸಬಹುದಾದರು ಎಲ್ಲಕ್ಕೂ ಸಮಾನವೆನಿಸುವ ಕೆಲವು ಲಕ್ಷಣಗಳಿವೆ; ಎಲ್ಲವೂ ಮುಳ್ಳುಗಳುಳ್ಳ ನಿತ್ಯ ಹಸಿರಿನ ಪೊದೆ ಸಸ್ಯಗಳು ಇಲ್ಲವೆ ಮರಗಳು. ಎಲೆಗಳು ಒಂದೇ ಕಿರುಪತ್ತವನ್ನುಳ್ಳ ಸಂಯುಕ್ತ ಮಾದರಿಯವು; ಎಲೆಯ ತೊಟ್ಟಿನ ಅಕ್ಕಪಕ್ಕಗಳಲ್ಲಿ ಸಾಮಾನ್ಯವಾಗಿ ರೆಕ್ಕೆಗಳಿವೆ. ಆದರೆ ಮಾದಳ ಮತ್ತು ಗ್ರೇಪ್ ಹಣ್ಣುಗಳ ಎಲೆತೊಟ್ಟಿನಲ್ಲಿ ಮಾತ್ರ ರೆಕ್ಕೆಗಳಿಲ್ಲ. ಎಲೆಗಳ ಅಲಗಿನಲ್ಲಿ ಎಲ್ಲೆಡೆಯೂ ಹರಡಿರುವ ತೈಲಗ್ರಂಥಿಗಳಿವೆ. ಈ ಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ತೈಲದಿಂದಾಗಿ ಜಂಬೀರ ಗಿಡಗಳಿಗೆ ವಿಶಿಷ್ಟ ವಾಸನೆಯಿರುತ್ತದೆ. ಹೂಗಳು ಬಿಳಿ ಅಥವಾ ಕೆನೆಬಣ್ಣದವು; ಮಧ್ಯಾರಂಬಿ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿದೆ. ಫಲಗಳು ವಿಶಿಷ್ಟ ರೀತಿಯವು; ಇವಕ್ಕೆ ಹೆಸ್ಪರಿಡಿಯಮ್ ಎಂಬ ಶಾಸ್ತ್ರೀಯ ಹೆಸರಿದೆ. ದಪ್ಪವಾದ ಹಾಗೂ ಚರ್ಮಿಲವಾದ ಹೊರಸಿಪ್ಪೆ (ಎಕ್ಸೋಕಾರ್ಪ್), ತೆಳುವಾದ ಮತು ಬಿಳಿಯ ಬಣ್ಣದ ನಡುಸಿಪ್ಪೆ (ಮೀಸೋಕಾರ್ಪ್) ಮತ್ತು ಹಣ್ಣಿನ ತಿರುಳಿನೊಳಕ್ಕೆ ಚಾಚಿ ಅದನ್ನು ಹಲವಾರು ತೊಳೆಗಳಾಗಿ ವಿಂಗಡಿಸುವ ತೆಳುವಾದ ಒಳಸಿಪ್ಪೆ (ಎಂಡೋಕಾರ್ಪ್) ಇವು ಫಲಗಳಲ್ಲಿ ಕಾಣಬರುವ ಮುಖ್ಯ ಭಾಗಗಳು. ಅಲ್ಲದೆ ಹಣ್ಣಿನ ತಿರುಳಿನಲ್ಲಿ ಅಸಂಖ್ಯಾತ ವಾಸ ರಸಭರಿತ ಏಕಕೋಶಗಳಿವೆ. ಇವಕ್ಕೆ ಸಾಮಾನ್ಯವಾಗಿ ಕುಸುಮಗಳು ಎಂದು ಹೆಸರು.

	ಜಂಬೀರ ಫಲಗಳಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು-ಮುಖ್ಯವಾಗಿ `ಸಿ ವಿಟಮಿನ್-ಅಧಿಕ ಮೊತ್ತದಲ್ಲಿರುವುದರಿಂದ ಇವು ಬಹಳ ಉಪಯುಕ್ತವೆನಿಸಿವೆ. ಇವನ್ನು ಉಪ್ಪಿನಕಾಯಿ, ಜಾಮ್, ಜೆಲಿ, ಪಾನೀಯಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಇವುಗಳ ಸಿಪ್ಪೆಯಿಂದ ಪಡೆಯಲಾಗುವ ತೈಲವನ್ನು ವಿವಿಧ ರೀತಿಯ ಆಹಾರವಸ್ತುಗಳಿಗೆ ರುಚಿ ಹಾಗೂ ವಾಸನೆ ಕೊಡಲು ಬಳಸುವುದುಂಟು. ಜಂಬೀರ ಫಲಗಳಿಗೆ ತಂಪುಕಾರಕ, ಪಿತ್ತಹರ ಮುಂತಾದ ಗುಣಗಳೂ ಇವೆ. ಜಂಬೀರ ಜಾತಿಯ ಗಿಡಗಳ ಕೃಷಿ ವಿಧಾನ, ಇಳುವರಿ ಮತ್ತು ಉಪಯೋಗಗಳ ವಿವರಗಳಿಗೆ ಆಯಾ ಪ್ರಭೇದಗಳ ಶೀರ್ಷಿಕೆಗಳನ್ನು ನೋಡಿ.
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ